ಯಾರೆ ಬಂದವರು ಮನೆಗೆ
ರಾಗ: ಸೌರಾಷ್ಟ್ರ,       ತಾಳ: ಅಟ್ಟ,
ಯಾರೆ ಬಂದವರು ಮನೆಗೆ ಮತ್ಯಾರೆ ಬಂದವರು
ನಾರಾಯಣ ಕೃಷ್ಣ ನಾಥನಲ್ಲದೆ ಬೇರೆ   ||ಪಲ್ಲವಿ||

ವಜ್ರರೇಖೆಗಳಿವೆ ಮನೆಯಲ್ಲಿ ಕಾಲ
ಗೆಜ್ಜೆ ಧ್ವನಿ ಕೇಳಿ ಬರುತಿದೆ
ವಜ್ರಮಾಣಿಕ್ಯವೆಲ್ಲ ಹರಿದು ಬಿದ್ದಿವೆ
ಮಜ್ಜಿಗೆಯೊಳಗೆ ಕಾಣ್ವ ಬೆಣ್ಣೆಯ ಕಾಣೆ  ||೧||

ಕೊಂಬು ಕೊಳಲು ರಭಸಗಳಿವೆ
ಕದಂಬ ಕಸ್ತೂರಿ ಪೆಂಪೆಸೆದಿವೆ
ಪೂಂಬಟ್ಟೆ ಚಲ್ಲಣ ಚಲ್ಲಿದೆ ಹಾಲು
ಕುಂಭ ಒಡೆದು ಮನೆತುಂಬ ಬೆಳ್ಳಗಾಯಿತು ||೨||

ಮಿಂಚು ಹುಳದಂತೆ ಹೊಳೆವುತ ತಮ್ಮ
ಸಂಚರರೊಡಗೂಡಿ ಚಲಿಸುತ್ತ
ವಂಚಿಸಿ ಬೆಣ್ಣೆಯ ಮೆಲ್ಲುತ ನಮ್ಮ
ಲಂಚದ ಪುರಂದರವಿಠಲನಲ್ಲದೆ ಬೇರೆ  ||೩|| ದಾಸವಾಣಿ
ರಚನೆ: ಪುರಂದರದಾಸರು.

ನೋಡಿ
ಪುರಂದರದಾಸರ ಸಾಹಿತ್ಯ
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುರಂದರದಾಸರು
ಪರಿವಿಡಿ

ಉಲ್ಲೇಖ
ವರ್ಗ: ಪುರಂದರದಾಸ ಸಾಹಿತ್ಯ
ವರ್ಗ: ದಾಸ ಸಾಹಿತ್ಯ